ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ಬೆಂಗಳೂರಿನಿಂದ ಕಾರ್ಕಳದವರೆಗೆ ಬೃಹತ್ ವಾಹನ ರ‍್ಯಾಲಿ ನಡೆಯಿತು.

ಬೆಂಗಳೂರಿನ ಪರಶುರಾಮ ಥೀಮ್ ಪಾರ್ಕ್ ಜನಾಗ್ರಹ ಸಮಿತಿಯ ನೇತೃತ್ವದಲ್ಲಿ ಬೆಳಗ್ಗೆ ಆರಂಭವಾದ ರ‍್ಯಾಲಿಯಲ್ಲಿ 500ಕ್ಕೂ ಅಧಿಕ ವಾಹನಗಳಲ್ಲಿ ಕಾರ್ಯಕರ್ತರು ಕಾರ್ಕಳಕ್ಕೆ ಆಗಮಿಸಿದರು. ಬಳಿಕ ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಕಾರ್ಕಳದ ಹೆಮ್ಮೆಯ ಯೋಜನೆಯಾದ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ಅವರ ಕನಸಿನ ಯೋಜನೆಯಾದ ಥೀಮ್ ಪಾರ್ಕ್ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡುತ್ತಿಲ್ಲ. ರಾಜಕೀಯ ದ್ವೇಷದಿಂದ ಯೋಜನೆಯ ಅಭಿವೃದ್ಧಿಗೆ ತಡೆಯೊಡ್ಡಲಾಗುತ್ತಿದೆ ಎಂದು ದೂರಿದರು. ಪರಶುರಾಮರ ವಿಚಾರವಾಗಿ ಮಾತನಾಡಿದ ಕಾರಣಕ್ಕಾಗಿಯೇ ಉದಯ್ ಕುಮಾರ್ ಶೆಟ್ಟಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ಹರೀಶ್ ಪೂಂಜಾ ವ್ಯಂಗ್ಯವಾಡಿದರು.



