ಸಂಗೀತ ಪರಿಷತ್ ಮಂಗಳೂರು ವತಿಯಿಂದ ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠದ ಸಹಯೋಗದಲ್ಲಿ ‘ಮಂಗಳೂರು ಸಂಗೀತೋತ್ಸವ-2026’ ನವೆಂಬರ್ 27ರಿಂದ 29ರವರೆಗೆ ನಗರದ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಗೀತ ಪರಿಷತ್ ಮಂಗಳೂರು ಅಧ್ಯಕ್ಷ ಎಚ್. ಸುಬ್ರಹ್ಮಣ್ಯ ರಾವ್, ನವೆಂಬರ್ 27ರಂದು ಸಂಜೆ 5 ಗಂಟೆಗೆ ಸಂಗೀತೋತ್ಸವ ಉದ್ಘಾಟನೆಗೊಳ್ಳಲಿದೆ. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಅವರ ಉಪಸ್ಥಿತಿಯಲ್ಲಿ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಅವರು ಉದ್ಘಾಟಿಸಲಿದ್ದಾರೆ. ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎ. ಭರತ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಎಚ್. ಸುಬ್ರಹ್ಮಣ್ಯ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸಂಜೆ 5.30ರಿಂದ ಪುತ್ತೂರಿನ ಅನೀಶ್ ವಿ. ಭಟ್ ಅವರ ಗಾಯನ ಕಛೇರಿ ನಡೆಯಲಿದೆ ಎಂದರು.
ನವೆಂಬರ್ 28ರಂದು ಸಂಜೆ 5 ಗಂಟೆಗೆ ಹೈದರಾಬಾದ್ನ ಜೆ.ಎಸ್. ಶ್ರೀರಾಮ್ ಅವರ ಗಾಯನ ಕಛೇರಿ ನಡೆಯಲಿದೆ. ನವೆಂಬರ್ 29ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಖ್ಯಾತ ಸಂಗೀತ ಕಲಾವಿದೆ ಡಾ. ಎಂ.ಎಸ್. ಶೀಲಾ ಅವರ ಗಾಯನ ಕಛೇರಿ ಪ್ರಸ್ತುತಗೊಳ್ಳಲಿದೆ.
ಅಂದು ಮಧ್ಯಾಹ್ನ 2 ಗಂಟೆಯಿಂದ ‘ಮುರಳೀ ಮಾಧುರಿ’ ಎಂಬ ವಿಶೇಷ ಗೋಷ್ಠಿ ಗಾಯನ ಕಾರ್ಯಕ್ರಮ ನಡೆಯಲಿದ್ದು, ಬಳ್ಳಪದವಿನ ವೀಣಾವಾದಿನಿ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳು ಸಂಗೀತ ಪ್ರಸ್ತುತಿಯನ್ನು ನೀಡಲಿದ್ದಾರೆ.



